-: ಪತ್ರಿಕಾ ಪ್ರಕಟಣೆ :-
ದಿನಾಂಕ. 25/11/2013 ರಂದು ಶ್ರೀರಂಗಪಟ್ಟಣ ಉಪ-ವಿಭಾಗದ ಡಿ.ಎಸ್.ಪಿ. ರವರಿಗೆ ಶ್ರೀರಂಗಪಟ್ಟಣ ಟೌನ್ ಬಿ.ಎಂ ರಸ್ತೆಯಲ್ಲಿರುವ ಸಚಿನ್ ಹೋಟೆಲ್ನ ರೂಂ ಒಂದರಲ್ಲಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆಸಾಮಿಯಾದ ಶಿವರಾಮು ಎಂಬುವನು ಕೆಲವು ಆಸಾಮಿಗಳ ಜೊತೆ ಸೇರಿಕೊಂಡು ಅಪಾರ ಹಣವನ್ನು ಇಟ್ಟುಕೊಂಡು ಒಂದು ಲಕ್ಷಕ್ಕೆ ಎರಡು ಲಕ್ಷ ನಂತೆ ದ್ವಿಗುಣ ಗೊಳಿಸಿ, ಖೋಟಾನೋಟುಗಳನ್ನು ವಿಲೇವಾರಿ ಮಾಡಿ, ವಂಚನೆ ಮಾಡಲು ಸೇರಿದ್ದಾರೆಂದು ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಮೇರೆಗೆ ಪಂಚಾಯ್ತುದಾರರೊಂದಿಗೆ ದಾಳಿ ಮಾಡಿ ನೋಡಲಾಗಿ ಹೋಟೆಲ್ ರೂಮಿನಲ್ಲಿ ಐದು ಜನ ಆಸಾಮಿಗಳು ಇದ್ದು, 25 ಲಕ್ಷ ರೂ ನಗದು ಹಣ, ಹಣ ಎಣಿಸುವ ಯಂತ್ರ, ಖೋಟಾನೋಟನ್ನು ಪತ್ತೆ ಮಾಡುವ ಯಂತ್ರಗಳು ಕಂಡು ಬಂದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಅಲ್ಲದೇ ಸದರಿ ಆಸಾಮಿಗಳು ಹೋಟೆಲ್ಗೆ ಬರಲು ಉಪಯೋಗಿಸಿದ ಒಂದು ಮಾರುತಿ ಎಸ್ಟೀಮ್ ಕಾರು ಮತ್ತು ಒಂದು ಸ್ಯಾಂಟ್ರೋ ಕಾರುಗಳನ್ನು ಮತ್ತು 7 ಮೊಬೈಲ್ ಪೋನ್ಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿರುತ್ತೆ.
ಆರೋಪಿಗಳ ಬಳಿ 25 ಲಕ್ಷ ರೂ ನಗದು ಹಣ, ಹಣ ಎಣಿಸುವ ಯಂತ್ರ, ಖೋಟಾನೋಟು ಪತ್ತೆ ಮಾಡುವ ಯಂತ್ರ ಮತ್ತು ಕಾರುಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇಲ್ಲವೆಂದು ತನಿಖೆಯಿಂದ ಕಂಡುಬಂದಿದ್ದು, ಆರೋಪಿಗಳು ಯಾವುದೋ ಅಪರಾಧದಿಂದ ಪಡೆದ ಹಣವನ್ನು ತಂದು ಖೋಟಾನೋಟುಗಳೊಂದಿಗೆ ದ್ವಿಗುಣ ಪಡಿಸಿಕೊಳ್ಳುವ ವ್ಯವಹಾರದಲ್ಲಿ ಭಾಗಿಯಾಗಲು ಬಂದಿದ್ದ ಬಗ್ಗೆ ತಿಳಿದು ಬಂದಿದ್ದರಿಂದ ಆರೋಪಿಗಳನ್ನು ಹಾಗೂ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಮೊ.ನಂ. 651/13 ಕಲಂ. 41 ಕ್ಲಾಸ್ [ಡಿ] ರೆ:ವಿ 102 ಸಿಆರ್ಪಿಸಿ ಕಲಂ. 379-489[ಎ]-420 ಜೊತೆಗೆ 511 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. ಆರೋಪಿಗಳ ಪೈಕಿ ಎಂ.ಬಿ.ಅರುಣ್ ಕುಮಾರ್ ಎಂಬುವವನ ಬಳಿ ಒಂದು ಗುಂಡು ತುಂಬಿದ್ದ ರಿವಾಲ್ವರ್ ಸಹ ಪತ್ತೆಯಾಗಿದ್ದು, ಇದರ ಬಗ್ಗೆಯೂ ಸಹ ತನಿಖೆ ನಡೆಸಲಾಗುತ್ತಿದೆ.
ದಸ್ತಗಿರಿ ಮಾಡಿರುವ ಆರೋಪಿಗಳ ವಿವರ ಈ ಕೆಳಕಂಡಂತೆ ಇರುತ್ತದೆ.
1] ಶಿವರಾಮು ಉ: ಶಿವರಾಮೇಗೌಡ ಬಿನ್ ಲೇಟ್.ಮಂಚೇಗೌಡ, 39 ವರ್ಷ, ವ್ಯವಸಾಯ, ಅಂಕೇಗೌಡನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೂಕು.
2] ಎಸ್. ಮಂಜುನಾಥ ಬಿನ್ ಎಸ್. ಶಿವಣ್ಣ. 40 ವರ್ಷ, ವ್ಯವಸಾಯ, ಮಾರಿಗುಡಿ ಬೀದಿ, ಗಂಜಾಂ, ಶ್ರೀರಂಗಪಟ್ಟಣ ಟೌನ್
3] ಆರ್.ರಮೇಶ ಬಿನ್ ರಾಜಗೋಪಾಲ, 42 ವರ್ಷ, ಅನ್ನಪೂರ್ಣೇಶ್ವರಿ ವಾಟರ್ ಸರ್ವಿಸ್ ನಲ್ಲಿ ವಾಟರ್ ಸರ್ವಿಸ್ ಕೆಲಸ, ಹಳೆ ವೆಲ್ಲೆಸ್ಲಿ ಬ್ರಿಡ್ಜ್, ಶ್ರೀರಂಗಪಟ್ಟಣ ಟೌನ್
4] ಆರ್.ಚೇತನ್ಕುಮಾರ್ ಬಿನ್ ಆರ್. ರಾಜು. 27 ವರ್ಷ, 2 ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ
5] ಎಂ.ಬಿ. ಅರುಣ್ಕುಮಾರ್ ಬಿನ್ ಲೇಟ್.ಪುಟ್ಟಸ್ವಾಮಿ, 35 ವರ್ಷ, 1 ನೇ ಕ್ರಾಸ್, ವಿದ್ಯಾನಗರ, ಮಂಡ್ಯ ಸಿಟಿ.
ಈ ಮೇಲ್ಕಂಡ ಆರೋಪಿಗಳಲ್ಲದೇ ಇನ್ನೊಬ್ಬ ಆರೋಪಿ ಮೈಸೂರಿನ ಇಮ್ತಿಯಾಜ್ ಎಂಬುವನು ತಪ್ಪಿಸಿಕೊಂಡು ಓಡಿ ಹೋಗಿದ್ದು, ಆತನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿರುತ್ತದೆ.
ಈ ದಾಳಿಯನ್ನು ಶ್ರೀರಂಗಪಟ್ಟಣ ಉಪ-ವಿಭಾಗದ ಡಿ.ಎಸ್.ಪಿ. ರವರಾದ ಶ್ರೀಮತಿ. ಗೀತಾಪ್ರಸನ್ನ, ಪಾಂಡವಪುರ ಪಿಎಸ್ಐ ಶ್ರೀ. ಅಜರುದ್ದೀನ್ ಮತ್ತು ಇತರೆ ಸಿಬ್ಬಂದಿಗಳು ಕೈಗೊಂಡಿರುತ್ತಾರೆ. ಈ ಪ್ರಕರಣದ ಮುಂದಿನ ತನಿಖೆ ಜಾರಿಯಲ್ಲಿರುತ್ತದೆ.
No comments:
Post a Comment