ಪತ್ರಿಕಾ ಪ್ರಕಟಣೆ
ಮಳವಳ್ಳಿ ಟೌನ್ ಎನ್.ಇ.ಎಸ್. ಬಡವಾಣೆಯಲ್ಲಿ ವಾಸವಾಗಿರುವ ಶ್ರೀಮತಿ ವಿಜಯ ಎಂಬುವವರಿಗೆ ಈಗ್ಗೆ ಮೂರು ತಿಂಗಳ ಹಿಂದೆ ಯಾರೋ ಒಬ್ಬ ವ್ಯಕ್ತಿ ಪೂಜೆ ಮಾಡಿಸಿ ನಿಧಿಯನ್ನು ತೆಗೆದುಕೊಡುವುದಾಗಿ ನಂಬಿಸಿ ಆಕೆಯಿಂದ ಹಣ ಹಾಗೂ ಚಿನ್ನದ ಒಡವೆಗಳನ್ನು ತೆಗೆದುಕೊಂಡು ಹೋದವನು ಈವರೆಗೆ ವಾಪಸ್ ಬರದೇ ಇದ್ದು, ಈತನ ಹೆಸರು ವಿಳಾಸವನ್ನು ಆಕೆಯು ವಿಚಾರಿಸಿಕೊಂಡಿದ್ದು, ಆತನ ಹೆಸರು ಜೆ.ರಾಜ ಬಿನ್ ಜವರಯ್ಯ, 54 ವರ್ಷ, ಗಿರಿಜನರು, ವೆಂಕಟಯ್ಯನ ಛತ್ರ, ವಾಟರ್ ಟ್ಯಾಂಕ್ ಹತ್ತಿರ, ಚಾಮರಾಜನಗರ ಎಂಬುದಾಗಿ ತಿಳಿದುಬಂದಿದ್ದು, ದಿನಾಂಕ:26-05-2011 ರಂದು ಆಕೆಯು ಮಳವಳ್ಳಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಹೋಗುತ್ತಿದ್ದಾಗ ಮೇಲ್ಕಂಡ ವ್ಯಕ್ತಿ ಜೆ.ರಾಜುವನ್ನು ಹಿಡಿದುಕೊಂಡು ಇತರ ಸಂಬಂಧಿಕರ ಜೊತೆ ಆತನನ್ನು ಮಳವಳ್ಳಿ ಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದು, ಈ ವಿಚಾರದಲ್ಲಿ ಮಳವಳ್ಳಿ ಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ.73/2011 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಆರೋಪಿಯಾದ ಜೆ.ರಾಜು ಬಿನ್ ಜವರಯ್ಯನನ್ನು ಮಳವಳ್ಳಿ ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ರೀ ಎಲ್.ಕೆ.ರಮೇಶ್ ರವರು ಕೂಲಂಕುಶವಾಗಿ ವಿಚಾರಣೆಗೊಳಪಡಿಸಲಾಗಿ ಆತನು ಮಳವಳ್ಳಿ ಟೌನ್ ಮತ್ತು ಅಕ್ಕಪಕ್ಕದ ಹಳ್ಳಿಗಳಲ್ಲಿ ಉಷಾರಿಲ್ಲದವರಿಗೆ ಮತ್ತು ಹಣಕಾಸಿನ ತೊಂದರೆ ಇದ್ದವರಿಗೆ ಪೂಜೆ ಮಾಡಿ ಹಾಗೂ ತಮ್ಮ ಮನೆಗಳಲ್ಲಿ "ನಿಧಿ" ತೆಗೆದುಕೊಡುತ್ತೇನೆಂದು ಜನರನ್ನನು ನಂಬಿಸಿ, ಜನರಿಂದ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿ ಚಾಮರಜನಗರ ಟೌನ್ ನಲ್ಲಿರುವ ಮುತ್ತೂಟ್ ಪೈನ್ ಕಾರ್ಪ್ ಹಾಗೂ ಮಣಿಪುರಂ ಜನರಲ್ ಪೈನಾನ್ಸ್ ಅಂಡ್ ಲಿಜೀಂಗ್ ಲಿಮಿಟೆಡ್ ಕಂಪೆನಿಯಲ್ಲಿ ಹಾಗೂ ಚಾಮರಾಜನಗರ ಪಟ್ಟಣದ ಚಿಕ್ಕ ಅಂಗಡಿ ಬೀದಿಯ ಸೀರಿವಿ ಗಿರಿವಿ ಅಂಗಡಿಯಲ್ಲಿ ಇಟ್ಟಿರುತ್ತೇನೆಂದು ತಿಳಿಸಿದ್ದು, ಅದರಂತೆ ಆರೋಪಿ ರಾಜು ತಾನು ಗಿರಿವಿ ಇಟ್ಟಿದ್ದ ಕಂಪೆನಿ ಮತ್ತು ಗಿರಿವಿ ಅಂಗಡಿಯನ್ನು ತೋರಿಸಿದ ಮೇರೆಗೆ ಮುತ್ತೂಟ್ ಪೈನ್ ಕಾರ್ಪ್ ಕಂಪೆನಿಯಲ್ಲಿ ಅಡವಿಟ್ಟಿದ್ದ 145 ಗ್ರಾಂ ಚಿನ್ನದ ಆಭರಣಗಳು ಹಾಗೂ ಮಣಿಪುರಂ ಜನರಲ್ ಪೈನಾನ್ಸ್ ಲೀಜಿಂಗ್ ಲಿಮಿಟೆಡ್ ನಲ್ಲಿ ಇಟ್ಟಿದ್ದ 107 ಗ್ರಾಂ ಚಿನ್ನದ ಆಭರಣಗಳು ಹಾಗೂ ಸೀರಿವಿ ಗಿರಿವಿ ಅಂಗಡಿಯಲ್ಲಿಟ್ಟಿದ್ದ 3 ಗ್ರಾಂ ಚಿನ್ನವನ್ನು ಸೇರಿ ಒಟ್ಟು 255 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 5,50,000-00 ರೂಗಳಾಗಿರುತ್ತದೆ. ಸದರಿ ಆರೋಪಿ ಜೆ.ರಾಜುನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಈ ಪ್ರಕರಣವನ್ನು ಪತ್ತೆ ಮಾಡಲು ಶ್ರಮವಹಿಸಿದ ಮಳವಳ್ಳಿ ಟೌನ್ ಪೊಲೀಸ್ ಠಾಣೆಯ ಪಿಐ ಶ್ರೀ ಎಲ್.ಕೆ.ರಮೇಶ್ ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿರುತ್ತಾರೆ.